ರುದ್ರಮಹಾದೇವಿ
ಕಾಕತೀಯ ರಾಜವಂಶದ ಖ್ಯಾತ ರಾಣಿ (1261-95). ರುದ್ರಾಂಬಾ ಎಂಬುದು ಈಕೆಯ ಇನ್ನೊಂದು ಹೆಸರು. ಕಾಕತೀಯ ದೊರೆ ಗಣಪತಿದೇವನ ಮಗಳು. ತಂದೆಯ ಜೊತೆಯಲ್ಲಿಯೇ ರಾಜ್ಯವಾಳುತ್ತಿದ್ದು, ಅವನ ಅನಂತರ ತಾನೇ ರಾಣಿಯಾಗಿ ರುದ್ರದೇವ ಮಹಾರಾಜ ಎನ್ನುವ ಪುರುಷನಾಮದಿಂದ ರಾಜ್ಯವಾಳಿದಳು. ಗಣಪತಿದೇವನಿಗೆ ಗಂಡು ಮಕ್ಕಳಿಲ್ಲದಿದ್ದುದರಿಂದ ತನ್ನ ಜ್ಯೇಷ್ಠ ಪುತ್ರಿ ರುದ್ರಮಹಾದೇವಿಗೆ ಪಟ್ಟಕಟ್ಟಿ, ತನ್ನ ಜೊತೆ ಜಂಟಿ ರಾಜ್ಯಭಾರ ಮಾಡಲು ಅವಕಾಶ ಕಲ್ಪಿಸಿದ. ರಾಜವಂಶದವರಿಗೆ ಇದು ಅಸಮಾಧಾನವನ್ನುಂಟು ಮಾಡಿತು. ಗಣಪತಿಗೆ ವೃದ್ಧಾಪ್ಯ ಆವರಿಸಿದಾಗ ರುದ್ರಮಹಾದೇವಿಯೇ ಸಂಪೂರ್ಣವಾಗಿ ರಾಜ್ಯಭಾರದಲ್ಲಿ ತೊಡಗಿದಳು (1290). ಒಂದೆರಡು ವರ್ಷಗಳಲ್ಲಿ ಗಣಪತಿ ಅಧಿಕಾರದಿಂದ ನಿವೃತ್ತನಾದ. ಸ್ತ್ರೀಯೊಬ್ಬಳ ಕೈಕೆಳಗೆ ಸಾಮಂತರಾಗಿರುವುದನ್ನು ಸಹಿಸದ ಅನೇಕರು ದಂಗೆ ಎದ್ದರು. ಆದರೆ ಧೈರ್ಯದಿಂದ ಹೋರಾಡಿ, ಈ ದಂಗೆಗಳ ಹುಟ್ಟಡಗಿಸಿ ರುದ್ರ ಈಕೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಳು. ಈ ಕಾರ್ಯದಲ್ಲಿ ಅಂಬದೇವ, ಕನ್ನರನಾಯಕ, ಮಲ್ಲಿಕಾರ್ಜುನ ನಾಯಕ ಮೊದಲಾದವರು ಈಕೆಗೆ ಸಹಾಯಕರಾಗಿ ನಿಂತರು.

ಹೊರಗಿನ ಶತ್ರುಗಳು ಈ ಅವಕಾಶವನ್ನು ಉಪಯೋಗಿಸಿಕೊಂಡು ಕಾಕತೀಯರ ಪ್ರಭಾವವನ್ನು ಕುಗ್ಗಿಸಲು ಪ್ರಯತ್ನಿಸಿದರು. ಕಳಿಂಗದ ಗಜಪತಿ ದೊರೆ ಒಂದನೆಯ ನರಸಿಂಹ ಈಕೆಯ ಆಳ್ವಿಕೆಯ ಪ್ರಾರಂಭದ ವರ್ಷಗಳಲ್ಲಿ ವೆಂಗಿಯನ್ನು ತನ್ನ ವಶಮಾಡಿಕೊಂಡಿದ್ದುದು ತಿಳಿದು ಬರುತ್ತದೆ. ಗಜಪತಿ ಮತ್ಸವಂಶದ ಸಾಮಂತ ಒಡ್ಡಾಡಿಯ ಜೊತೆ ಸೇರಿ ಕಾಕತೀಯ ರಾಜ್ಯಕ್ಕೆ ಮುತ್ತಿಗೆ ಹಾಕಿ, ಗೋದಾವರಿ ತೀರದ ದಾಕ್ಷಾರಾಮದ ವರೆಗಿನ ಪ್ರದೇಶವನ್ನೂ ಆಕ್ರಮಿಸಿಕೊಂಡ. ಪೋತಿನಾಯಕ ಮತ್ತು ಪ್ರೋಲಿನಾಯಕರ ನೇತೃತ್ವದಲ್ಲಿ ರುದ್ರಮಹಾದೇವಿ ಒಂದು ಸೈನ್ಯವನ್ನು ಕಳುಹಿಸಿದಳು. ಈ ಸೈನ್ಯ ಗಜಪತಿ ಮತ್ತು ಸ್ನೇಹಿತರನ್ನು ಸಂಪೂರ್ಣವಾಗಿ ಸೋಲಿಸಿ, ಕಾಕತೀಯರ ಅಧಿಕಾರವನ್ನು ಕರಾವಳಿ ಆಂಧ್ರದಲ್ಲಿ ಪುನಃ ನೆಲಸುವ ಹಾಗೆ ಮಾಡಿತು.

ಮಧುರೆಯ ಪಾಂಡ್ಯರು ಕಾಕತೀಯ ರಾಜ್ಯದ ಅನೇಕ ಭಾಗಗಳನ್ನು ಆಕ್ರಮಿಸಿಕೊಂಡರು. ತೆಲುಗು ಚೋಡ ರಾಜನನ್ನು ಪದಚ್ಯುತನನ್ನಾಗಿಸಿ ಕಂಚಿಯ ಸುತ್ತುಮುತ್ತಲ ಪ್ರದೇಶಗಳನ್ನು ಪಾಂಡ್ಯರು ಆಕ್ರಮಿಸಿಕೊಂಡರು. ರುದ್ರಮಹಾದೇವಿಯ ಸಾಮಂತನಾದ ಅಂಬದೇವ ವೀರಾವೇಶದಿಂದ ಹೋರಾಡಿ ಮೊದಮೊದಲು ಜಯವನ್ನು ಗಳಿಸಿದರೂ ಕೊನೆಗೆ ಪಾಂಡ್ಯರಿಂದ ಪರಾಜಿತನಾದ. ಸ್ವಲ್ಪ ಕಾಲದವರೆಗೆ ಕಾಕತೀಯ ರಾಜ್ಯದ ಕೆಲವು ಭಾಗಗಳು ಪಾಂಡ್ಯರ ಸಾಮಂತರ ಅಧೀನದಲ್ಲಿದ್ದವು.

ಸೇವುಣ ದೊರೆ ಮಹಾದೇವ ರುದ್ರಮಹಾದೇವಿಯ ಮೇಲೆ ಯುದ್ಧ ಮಾಡಲು ನಿರ್ಧರಿಸಿದ. ಇವರಿಬ್ಬರಿಗೂ ನಡೆದ ಯುದ್ಧದಲ್ಲಿ ಮಹಾದೇವ ಮೊದಲು ಮೇಲುಗೈ ಪಡೆದ. ತ್ರಿಕಳಿಂಗ ರಾಣಿಯನ್ನು ಸೋಲಿಸಿ ಪಂಚಮಹಾಶಬ್ದಗಳನ್ನು ಕಸಿದುಕೊಂಡು, ಆನೆಗಳನ್ನು ಅಪಹರಿಸಿದ; ಆದರೆ ಸ್ತ್ರೀಯಾದ್ದರಿಂದ ಈಕೆಯನ್ನು ಮಹಾದೇವ ಕೊಲ್ಲಲಿಲ್ಲವೆಂದು ಸೇವುಣ ಶಾಸನಗಳು ತಿಳಿಸುತ್ತವೆ. ಆದರೆ ಸಿದ್ಧೇಶ್ವರ ಚರಿತ್ರಮು ಮತ್ತು ಪ್ರತಾಪಚರಿತ್ರಮು ಎಂಬ ತೆಲುಗು ಗ್ರಂಥಗಳಿಂದ ತಿಳಿಯಬರುವ ಸಂಗತಿ ರುದ್ರಮಹಾದೇವಿಗೆ ಅನುಕೂಲವಾಗಿದೆ. ಹದಿನೈದು ದಿನಗಳ ಘೋರ ಯುದ್ಧದ ಅನಂತರ ಮಹಾದೇವ ಸೋತು ದೇವಗಿರಿಗೆ ಓಡಿಹೋದನೆಂದೂ ರುದ್ರಮಹಾದೇವಿಗೆ ಚಿನ್ನದ ನಾಣ್ಯಗಳನ್ನು ಕಾಣಿಕೆಯಾಗಿ ಒಪ್ಪಿಸಿದನೆಂದೂ ಈ ಗ್ರಂಥಗಳು ತಿಳಿಸುತ್ತವೆ. ಸಾರಂಗ ಪಾಣಿ ಎಂಬ ಒಬ್ಬ ಸೇವುಣ ರಾಜಕುಮಾರ ರುದ್ರಮಹಾದೇವಿಯ ಆಶ್ರಯದಲ್ಲಿದ್ದ ಎನ್ನುವ ವಾದವೂ ಇದೆ. ಒಟ್ಟಿನಲ್ಲಿ ಈ ವಿಷಯದಲ್ಲಿ ಖಚಿತವಾದ ಮಾಹಿತಿ ದೊರಕುವುದಿಲ್ಲ. ಸೇವುಣ ರಾಮಚಂದ್ರನ ಕಾಲದಲ್ಲಿಯೂ ರುದ್ರಮಾಹಾದೇವಿ ಸೇವುಣರ ಮೇಲೆ ಯುದ್ಧಮಾಡ ಬೇಕಾಗಿ ಬಂತು. ಗೋನವಿಠಲ ಮತ್ತು ಮನುಮ ಗಂಡಗೋಪಾಲನ ನೇತೃತ್ವದಲ್ಲಿ ಕಾಕತೀಯ ಸೈನ್ಯ ಹಾಲುವೆ ಮತ್ತು ಮಾನುತಿ ಎಂಬ ಕೋಟೆಗಳನ್ನು ವಶಪಡಿಸಿಕೊಂಡಿತು. ಹೀಗೆ ರುದ್ರಮಹಾದೇವಿ ಸೇವುಣರನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಳು.

ರುದ್ರಮಹಾದೇವಿ 34 ವರ್ಷಗಳ ಕಾಲ ಕಾಕತೀಯ ರಾಜ್ಯವನ್ನು ಸ್ಥೈರ್ಯದಿಂದ ನಡೆಸಿದಳು. ಈಕೆ ಪೂರ್ವ ಚಾಳುಕ್ಯ ರಾಜಕುಮಾರ ನಿಡದವೋಲುವಿನ ವೀರಭದ್ರನನ್ನು ವರಿಸಿದ್ದಳು. ಇವರಿಗೆ ಮುಮ್ಮಡಮ್ಮ ಮತ್ತು ರುಯ್ಯಮ್ಮ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಮೊದಲ ನೆಯ ಮಗಳಿಗೆ ಮಹಾದೇವನಿಂದ ವೀರರುದ್ರ ಅಥವಾ ಪ್ರತಾಪರುದ್ರ ಎಂಬ ಮಗ ಜನಿಸಿದ. ಈ ಮೊಮ್ಮಗನೇ ರುದ್ರ ಮಹಾದೇವಿಯ ಅನಂತರ ಕಾಕತೀಯ ದೊರೆಯಾದ.

ಆಂಧ್ರ ಮತ್ತು ಭಾರತದ ಚರಿತ್ರಾರ್ಹ ಮಹಿಳೆಯರಲ್ಲಿ ರುದ್ರಮಹಾ ದೇವಿ ಉಲ್ಲೇಖನೀಯ. ಸ್ತ್ರೀಯಾದರೂ ಇವಳು ಧೈರ್ಯ ಶೌರ್ಯಗಳಲ್ಲಿ ಯಾವ ರಾಜನಿಗೂ ಕಡಿಮೆ ಇರಲಿಲ್ಲ. ಪುರುಷ ವೇಷ ಧರಿಸಿ ಸಕಲ ರಾಜಕೀಯ ವ್ಯವಹಾರಗಳನ್ನೂ ನಿರ್ವಹಿಸುತ್ತಿದ್ದಳು. ಈಕೆಯ ಆಳ್ವಿಕೆಯಲ್ಲಿ ಪ್ರಜೆಗಳು ಸುಖ ಸಮಾಧಾನದಿಂದ ಬಾಳಿದರು. ರಾಜ್ಯಭಾರ ಕಾಲದಲ್ಲಿ ವಿಶೇಷವಾಗಿ ಯುದ್ಧಗಳನ್ನು ಮಾಡಬೇಕಾಗಿ ಬಂದರೂ ಸಾಂಸ್ಕøತಿಕ ವಿಷಯಗಳಲ್ಲಿಯೂ ಸಾಕಷ್ಟು ಆಸಕ್ತಿ ವಹಿಸಿದ್ದಳು. ಈಕೆ ಶೈವ ಮತ್ತು ವೈಷ್ಣವ ಮುನಿಗಳಿಗೆ ದಾನದತ್ತಿಗಳನ್ನು ನೀಡಿದಳು. ವಿಶ್ವೇಶ್ವರ ಶಿವದೇಶಿಕ ಈಕೆಯ ರಾಜಗುರುವಾಗಿದ್ದು, ಅನೇಕ ಶೈವಮಠ ಗಳಿಗೆ ದಾನಗಳನ್ನು ಕೊಡಿಸಿದ. ಈಕೆಯ ಆಡಳಿತ ಸುಗಮವಾಗಿದ್ದು ಜನಾನುರಾಗಿಯಾಗಿತ್ತೆಂದು ತಿಳಿದುಬರುತ್ತದೆ. ಇವಳು ದೊಡ್ಡ ದೊಡ್ಡ ದೇವಾಲಯಗಳನ್ನು ನಿರ್ಮಿಸಲಿಲ್ಲವಾದರೂ ಅನೇಕ ದೇವಾಲಯಗಳಿಗೆ ದಾನದತ್ತಿಗಳನ್ನು ಕೊಟ್ಟಳು. ಆ ಕಾಲದ ಶಾಸನಗಳಲ್ಲಿ ಈಕೆಯನ್ನು ಪ್ರಶಂಸಿಸಿರುವುದು ಕಂಡುಬರುತ್ತದೆ. ಕಷ್ಟಕರ ಸಮಯದಲ್ಲಿ ಕಾಕತೀಯ ರಾಜ್ಯಕ್ಕೆ ರಾಣಿಯಾಗಿ ರಾಜ್ಯವನ್ನು ಚೆನ್ನಾಗಿ ಕಾಪಾಡಿ ಅದನ್ನು ತನ್ನ ಮೊಮ್ಮಗನಿಗೆ ಕೊಟ್ಟ ಕೀರ್ತಿ ಈಕೆಗೆ ಸೇರುತ್ತದೆ. ದಕ್ಷಿಣ ಭಾರತದಲ್ಲಿ ಸ್ವತಂತ್ರವಾಗಿ ಆಳಿದ ರಾಣಿಯರಲ್ಲಿ ರುದ್ರಮಹಾದೇವಿಗೆ ಉನ್ನತ ಸ್ಥಾನವಿದೆ. 			(ನೋಡಿ- ಕಾಕತೀಯರು)                    
     (ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ